ಬರಪೀಡಿತ ಜನರ ದಾಹ ನೀಗಿಸಲು ಯಶ್ ಕೈ ಹಿಡಿದ 'ಅಕಿರ' ತಂಡ - ಯಶೋಮಾರ್ಗ
"ಯಶೋಮಾರ್ಗ" ಚೊಕ್ಕ ಮನಸ್ಸು, ಚಿಕ್ಕ ಮಾರ್ಗ ನಟ ಯಶ್ ರ ಅಧಿಪಥ್ಯದಲ್ಲಿ ನಡೆಸಲಾಗುತ್ತಿರುವ ಫೌಂಡೇಶನ್. "ಯಶೋಮಾರ್ಗ" ದ ಉದ್ದೇಶವೇ ಶ್ಲಾಘನೀಯ ಏಕೆಂದರೆ 1972 ನಂತರ ಉತ್ತರ ಕರ್ನಾಟಕದ 12 ಜಿಲ್ಲೆಗಳಲ್ಲಿ ಎದುರಾಗಿರುವ ಭೀಕರ ಬರಗಾಲಕ್ಕೆ ಅಲ್ಲಿನ ಜನ ನಲುಗಿ ಹೋಗಿದ್ದಾರೆ ಹನಿ ನೀರಿಗಾಗಿ ಆ ಭಾಗದಲ್ಲಿ ಹಾಹಾಕಾರ. ದಿನ ಕುಡಿಯುವ ದಿನಬಳಕೆಗೆ ಅವಶ್ಯಕವಿರುವ ನೀರಿಗಾಗಿ ಅಲ್ಲಿನ ಜನ ಮೈಲುಗಟ್ಟಲೆ ಕ್ರಮಿಸಿ ತಮ್ಮ ನೀರಿನ ಅವಶ್ಯಕತೆಯನ್ನು ನೀಗಿಸಿಕೊಳ್ಳುವಷ್ಟು ಪರಿಸ್ಥಿತಿ ಬಿಗಡಾಯಿಸಿ ಹೋಗಿದೆ.
ಕಾರಣ ನೀರಿಲ್ಲದೆ ಜನ ಸಾಕಷ್ಟು ಕಷ್ಟ ಎದುರಿಸುವಂತಾಗಿದೆ. ಈಗಾಗಿ ನಟ ಯಶ್ ಒಂದು ಸಂಸ್ಥೆಯನ್ನು ಹುಟ್ಟುಹಾಕಿದ್ದು ಇದು ಆ ಭಾಗದ ನೀರಿನ ಅವಶ್ಯಕತೆಯನ್ನು ಪೂರೈಸುವ ಛಲ ಹೊಂದಿದೆ. ಉತ್ತರ ಕರ್ನಾಟಕದ 50 ಹಳ್ಳಿಗಳಿಗೆ ಒಂದು ದಿನ ಬಿಟ್ಟು ದಿನ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡುವ ಛಲ ಹೊಂದಿದ್ದು, ಈಗಾಗಲೇ ಬಿಜಾಪುರ ಜಿಲ್ಲೆಯ 25 ಹಳ್ಳಿಗಳಿಗೆ ಈ ಸೌಲಭ್ಯ ಹೋದಗಿಸಿದ್ದು ಇನ್ನು ಗುಲ್ಬರ್ಗ ಜಿಲ್ಲೆಯ 25 ಹಳ್ಳಿಗಳಿಗೆ ಈ ಸೌಲಭ್ಯ ಸದ್ಯದಲ್ಲೇ ತಲುಪಲಿದೆ.
ಇಂತಹ ಒಳ್ಳೆ ಕೆಲಸಕ್ಕೆ ಈಗ ಕನ್ನಡ ಚಿತ್ರೋದ್ಯಮದವರು ಕೈ ಜೋಡಿಸಿದ್ದು ಕಳೆದ ಮೇ 6 ರಂದು ರಾಜ್ಯಾದಂತ್ಯ ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ ನಟ ಅನೀಶ್ ನಟಿಸಿರುವ "ಅಕಿರ" ಚಿತ್ರದ ನಿರ್ಮಾಪಕರಾದ ಚೇತನ್ ರವರು 'ಅಕಿರ' ಮಾಡಿದ ಕಲೆಕ್ಷನ್ ನಲ್ಲಿ ಸುಮಾರು 10 ಲಕ್ಷ ರೂಪಾಯಿಗಳನ್ನು ಅವರು ಯಶೋಮಾರ್ಗ ಫೌಂಡೇಶನ್ ಗೆ ದೇಣಿಗೆಯಾಗಿ ನೀಡಿದ್ದಾರೆ. ಈ ಮೂಲಕ ಉತ್ತರ ಕರ್ನಾಟಕದ ಬರಪೀಡಿತ ಪ್ರದೇಶದ ಮಂದಿಗೆ ನೀರಿನ ಸಮಸ್ಯೆ ನಿವಾರಿಸಲು ಸಣ್ಣದೊಂದು ಸಹಾಯ ಮಾಡಿದ್ದಾರೆ. ಮೂಲಗಳ ಪ್ರಕಾರ ಅಕಿರ ಚಿತ್ರ ಬಿಡುಗಡೆಗೊಂಡ ಮೊದಲ ವಾರದಲ್ಲೇ 3.25 ಕೋಟಿ ಗಳಿಸಿದೆ ಎಂದು ಹೇಳಲಾಗುತ್ತಿದೆ.
ಅಂತೂ ಅಭಿಮಾನಿಗಳು 'ಅಕಿರ' ಚಿತ್ರಕ್ಕೆ ಕೊಟ್ಟ ಯಶಸ್ಸನ್ನು ಅವರಿಗೆ ಮರಳಿಸಿ ನೀಡುವ ಮೂಲಕ ನೀರಿನ ಸಮಸ್ಯೆಗೆ ಕೈಲಾದಷ್ಟು ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.
0 comments