ಚಿನ್ನಸ್ವಾಮಿ ಮೈದಾನದಲ್ಲಿ ಮಿಂಚು ಹರಿಸಿದ ಕೃತಿ ಸನೋನ್!!

by - April 08, 2017


ನಿನ್ನೆ ಬೆಂಗಳೂರಿನ  ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್ ಬೆಡಗಿ ಕೃತಿ ಸನೋನ್ ನೃತ್ಯ ಮಾಡಿದ್ದರು. ಹೇರೊಪಂತಿ ಮತ್ತು ಇನ್ನಿತರ ಚಿತ್ರದ ಹಾಡಿಗೆ ಸೊಂಟ ಬಳುಕಿಸಿದ್ದರು.  ಕೃತಿ ಸನೋನ್ ನೃತ್ಯ ಪ್ರದರ್ಶನವನ್ನು ಪ್ರೇಕ್ಷಕರು ಕಣ್ತುಂಬಿಕೊಂಡಿದ್ದರು. 50ಕ್ಕೂ ಹೆಚ್ಚು ಸಹನೃತ್ಯಗಾರರೊಂದಿಗೆ ಹೆಜ್ಜೆಹಾಕಿ ರಂಜಿಸಿದರು. ಪಂಚಭಾಷ ಗಾಯಕ ಬೆನ್ನಿ ದಯಾಳ್ ಕೂಡ ತಮ್ಮ ಗಾಯನದಿಂದ ಗಮನ ಸೆಳೆದಿದ್ದಾರೆ.



'
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ದೆಹಲಿ ಡೇರ್ ಡೆವಿಲ್ಸ್ ವಿರುದ್ಧ 15 ರನ್ ಗಳ ರೋಚಕ ಗೆಲುವು ದಾಖಲಿಸಿದೆ.
ಬೆಂಗಳೂರು ತಂಡ ನೀಡಿದ್ದ 158 ರನ್ ಗಳ ಸವಾಲಿನ ಗುರಿಯನ್ನು ಬೆನ್ನು ಹತ್ತಿದ ದೆಹಲಿ ತಂಡ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 142 ರನ್ ಗಳನ್ನಷ್ಟೇ ಪೇರಿಸಲು ಶಕ್ತವಾಯಿತು. ಆ ಮೂಲಕ 15 ರನ್ ಗಳ ಅಂತರದಲ್ಲಿ ಆರ್ ಸಿಬಿ ತಂಡ ದೆಹಲಿ ವಿರುದ್ಧ ಸರಣಿಯ ತನ್ನ  ಮೊದಲ ಗೆಲುವು ದಾಖಲಿಸಿತು. ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಬೆಂಗಳೂರು ತಂಡ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 157 ರನ್ ಪೇರಿಸಿತು. ಜಾಧವ್ (69 ರನ್)ಅವರ ಸಮಯೋಚಿತ ಬ್ಯಾಟಿಂಗ್ ಪ್ರದರ್ಶನ ಬೆಂಗಳೂರು ತಂಡವನ್ನು ಕಡಿಮೆ ಮೊತ್ತಕ್ಕೆ  ಕುಸಿಯುವ ಅಪಾಯದಿಂದ ಪಾರು ಮಾಡಿತು.
ಉಳಿದಂತೆ ವಾಟ್ಸನ್ ಗಳಿಸಿದ 24 ರನ್ ಗಳೇ ಆರ್ ಸಿಬಿ ಪರ ಇತರೆ ಬ್ಯಾಟ್ಸ್ ಮನ್ ಗಳು ಗಳಿಸಿದ ಗರಿಷ್ಠ ಮೊತ್ತವಾಗಿತ್ತು.

ದೆಹಲಿ ಪರ ಮಾರಿಸ್ 3 ವಿಕೆಟ್ ಪಡೆದರೆ, ಜಹೀರ್ ಖಾನ್ 2 ಮತ್ತು ಕುಮಿನ್ಸ್ ಮತ್ತು ನದೀಮ್ ತಲಾ 1 ವಿಕೆಟ್ ಪಡೆದರು.

ಆರ್ ಸಿಬಿ ನೀಡಿದ 158 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ದೆಹಲಿ ತಂಡಕ್ಕೆ ಉತ್ತಮ ಆರಂಭ ದೊರೆಯಿತಾದರೂ ಮಧ್ಯಮ ಕ್ರಮಾಂಕದ ಕಳಪೆ ಬ್ಯಾಟಿಂಗ್ ನಿಂದಾಗಿ ದೆಹಲಿ ತಂಡ ದಿಢೀರ್ ಕುಸಿಯಿತು. ಕೇವಲ 55 ರನ್ ಗಳಾಗುವಷ್ಟರಲ್ಲೇ ದೆಹಲಿ ತಂಡದ ಮೂರು ವಿಕೆಟ್ ಗಳು  ಪತನವಾಗಿತ್ತು. ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ರಿಷಬ್ ಪಂತ್ (57 ರನ್) ಕೊಂಚ ಪ್ರತಿರೋಧ ಒಡ್ಡಿದರಾದರೂ ತಂಡವನ್ನು ಸೋಲಿನ ಸುಳಿಯಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ದೆಹಲಿ ತಂಡ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 142 ರನ್ ಗಳನ್ನಷ್ಟೇ  ಪೇರಿಸಲು ಶಕ್ತವಾಯಿತು. ಆ ಮೂಲಕ 15 ರನ್ ಗಳ ಅಂತರದಲ್ಲಿ  ಸೋಲುಕಂಡಿತು.
ಇನ್ನು ಹೈದರಾಬಾದ್ ನಲ್ಲಿ ಸನ್ ರೈಸರ್ಸ್ ತಂಡದ ಎದುರು ಉದ್ಘಾಟನಾ ಪಂದ್ಯದಲ್ಲಿ ಮುಗ್ಗರಿಸಿದ್ದ ಆರ್ ಸಿಬಿ ತವರಿನ ಅಭಿಮಾನಿಗಳ ಎದುರು ಪುಟಿದೆದಿದ್ದು, ಮುಂದಿನ ಪಂದ್ಯಗಳಲ್ಲೂ ಇದೇ ಪ್ರದರ್ಶನ ಕಾಯ್ದುಕೊಳ್ಳುವ ವಿಶ್ವಾಸ ನೀಡಿದೆ.
ಆರ್ ಸಿಬಿ ಪರ ಉತ್ತಮ ಬ್ಯಾಟಿಂಗ್ ಮಾಡಿ ಸವಾಲಿನ ಮೊತ್ತ ಪೇರಿಸಲು ನೆರವಾದ ಕೇದಾರ್ ಜಾದವ್ ಅರ್ಹವಾಗಿ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

You May Also Like

0 comments