ವಿಡಿಯೋ : ಮೈ ಜುಮ್ಮೆನಿಸಿಸುವ ಇಂಡಿಯಾ vs ಬಾಂಗ್ಲಾದೇಶ ಫೈನಲ್ ನ ಕೊನೆಯ ಓವರ್!!

by - March 18, 2018



ಕೊನೆಯ ಎಸೆತದವರೆಗೂ ರೋಚಕತೆ ಕಂಡ ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಜಯ ಗಳಿಸಿದೆ. ಶ್ರೀಲಂಕಾದಲ್ಲಿ ನಡೆದ ಟಿ20 ತ್ರಿಕೋನ ಸರಣಿಯ ಫೈನಲ್​​ನಲ್ಲಿ ಬಾಂಗ್ಲಾವನ್ನ 4 ವಿಕೆಟ್​ಗಳಿಂದ ಮಣಿಸಿದೆ. ಕೊನೆಯ ಎಸೆತಗಳಲ್ಲಿ ಸಿಕ್ಸ್​ ಬಾರಿಸಿದ ದಿನೇಶ್​ ಕಾರ್ತಿಕ್​ ಗೆಲುವಿನ ರೂವಾರಿ ಎನಿಸಿಕೊಂಡರು.

ಬಾಂಗ್ಲಾ ನೀಡಿದ 167 ರನ್​ ಗುರಿ ಬೆನ್ನಟ್ಟಿದ ಭಾರತಕ್ಕೆ, ನಾಯಕ ರೋಹಿತ್​ ಶರ್ಮಾ ಭರ್ಜರಿ ಆರಂಭ ಒದಗಿಸಿದರು. ಆರಂಭಿಕ ಓವರ್​ಗಳಲ್ಲಿ ರೋಹಿತ್ ಸಿಡಿಸಿದ 3 ಸಿಕ್ಸರ್​ ಬಾಂಗ್ಲಾ ಆಟಗಾರರಲ್ಲಿ ನಡುಕ ಹುಟ್ಟಿಸಿತ್ತು. ಆದರೆ, ಶಿಖರ್​ ಧವನ್​ ಹಾಗೂ ಸುರೇಶ್​ ರೈನಾ ಅವರ ವಿಕೆಟ್​ ಕಳೆದುಕೊಂಡ ನಂತರ ಭಾರತ ನಿಧಾನಗತಿಯ ಬ್ಯಾಟಿಂಗ್​​ಗೆ ಶರಣಾಗಬೇಕಾಯಿತು. ಕೆ.ಎಲ್​. ರಾಹುಲ್​ 14 ಎಸೆತಗಳಲ್ಲಿ 24 ರನ್​ ಗಳಿಸಿ ತಂಡಕ್ಕೆ ತಮ್ಮ ಕೊಡುಗೆ ನೀಡಿದರು.

3ನೇ ವಿಕೆಟ್​​ಗೆ ನಿಯಂತ್ರಣ ಕಾಯ್ದುಕೊಂಡು ಆಟವಾಡಿದ ರೋಹಿತ್​ ಹಾಗೂ ಮನಿಷ್​ ಪಾಂಡೆ ಜೋಡಿ, ಭಾರತ ತಂಡಕ್ಕೆ ಆಸರೆಯಾದರು. 14ನೇ ಓವರ್​ ಚಾಲ್ತಿಯಲ್ಲಿದ್ದಾಗ, ಸ್ಪಿನ್ನರ್​ ನಾಜ್ಮುಲ್​ ಎಸೆತಕ್ಕೆ ಸಿಕ್ಸ್​ ಬಾರಿಸಲೆತ್ನಿಸಿದ ರೋಹಿತ್ ​(56) ಮೊಹಮದುಲ್ಲಾಗೆ ಕ್ಯಾಚ್​ ನೀಡಿದರು.

ವಿಕೆಟ್​ ಕಾಯ್ದುಕೊಂಡು ಆಡಿದ ಮನಿಷ್​ ಪಾಂಡೆ ಬಹುಕಾಲ ಭಾರತಕ್ಕೆ ಆಸರೆಯಾದರು. 18 ಓವರ್​​ನಲ್ಲಿ ಭಾರತಕ್ಕೆ 35 ರನ್​ ಬೇಕಾಗಿದ್ದಾಗ, ಮುಸ್ತಫಿಜುರ್​ ಎಸೆದ ಮೊದಲ 4 ಬೌಲ್​ಗಳನ್ನ ಮಿಸ್​ ಮಾಡಿದ ವಿಜಯ್​ ಶಂಕರ್​ ಭಾರತವನ್ನು ಇಕ್ಕಟ್ಟಿಗೆ ಸಿಲುಕಿಸಿದರು. ಇದೇ ಓವರ್​​ನ ಕೊನೆಯ ಎಸೆತದಲ್ಲಿ ಮನಿಷ್​ ಪಾಂಡೆ ವಿಕೆಟ್​ ಒಪ್ಪಿಸಿದರು.

19ನೇ ಓವರ್​ ಆರಂಭಕ್ಕೆ ಬ್ಯಾಟಿಂಗ್​​ಗೆ ಬಂದ ದಿನೇಶ್​ ಕಾರ್ತಿಕ್​​ ಭಾರತಕ್ಕೆ ಮತ್ತೆ ಗೆಲುವಿನ ಆಸೆ ಮೂಡಿಸಿದರು. ಒಂದೇ ಓವರ್​​ನಲ್ಲಿ 22 ರನ್​ ಗಳಿಸಿದ ಕಾರ್ತಿಕ್​​ ಇಂಡಿಯನ್​ ಫ್ಯಾನ್ಸ್​​ಗಳಲ್ಲಿ ನಗು ಮೂಡಿಸಿದರು. ಕೊನೆಯ ಎಸೆತದಲ್ಲಿ ಗೆಲುವಿಗೆ 5 ರನ್​ ಬೇಕಿದ್ದಾಗ ಸಿಕ್ಸ್​ ಬಾರಿಸಿದ ದಿನೇಶ್​ ಕಾರ್ತಿಕ್(8 ಎಸೆತಗಳಲ್ಲಿ 29) ​ ಗೆಲುವಿನ ರೂವಾರಿಯಾದರು.

ಟಾಸ್​​ ಗೆದ್ದ ಭಾರತ ತಂಡ ಫೀಲ್ಡಿಂಗ್​ ಆರಿಸಿಕೊಂಡಿತು. ಆರಂಭಿಕ ಬ್ಯಾಟ್ಸ್​​ಮನ್​ ತಮೀಮ್​ ಇಕ್ಬಾಲ್​​ 15 ರನ್​ ಹಾಗೂ ಲಿಟನ್​ ದಾಸ್​ 11 ರನ್​ ಗಳಿಸಿದ್ದಾಗ, ಕ್ರಮವಾಗಿ ಸ್ಪಿನ್ನರ್​ಗಳಾದ ಯಜುವೀಂದ್ರ ಚಹಲ್​ ಹಾಗೂ ವಾಷಿಂಗ್​ಟನ್​ ಸುಂದರ್​ ಎಸೆತಕ್ಕೆ ಬಲಿಯಾದರು. ಇಕ್ಕಟ್ಟಿಗೆ ಸಿಲುಕಿದ್ದ ಬಾಂಗ್ಲಾಕ್ಕೆ ಒನ್​ಡೌನ್​ ಪ್ಲೇಯರ್​ ಶಬ್ಬೀರ್​ ರಹಮಾನ್​ ತಂಡಕ್ಕೆ ಆಸರೆಯಾದರು. 4 ಸಿಕ್ಸರ್​ ಹಾಗೂ 7 ಬೌಂಡರಿ ಬಾರಿಸಿದ ಶಬ್ಬೀರ್​​, 50 ಎಸೆತಗಳಲ್ಲಿ 77 ರನ್ ಗಳಿಸಿದರು.

You May Also Like

0 comments